ತ್ಯಾಲೊಫೈಟ -
ಸಸ್ಯಪ್ರಪಂಚದ ನಾಲ್ಕು ಪ್ರಮುಖ ವಿಭಾಗಗಳ ಪೈಕಿ ಮೊದಲನೆಯದು. ಅತ್ಯಂತ ನಿಮ್ನ ವರ್ಗದ ಸಸ್ಯಗಳನ್ನು ಒಳಗೊಂಡಿದೆ. ಬೀಜಕಗಳಿಂದ ಈ ಗುಂಪಿನ ಸಸ್ಯಗಳು ಸಂತಾನೋತ್ಪತ್ತಿ ನಡೆಸುವುವು. ಈ ವಿಭಾಗವನ್ನು ಹಾಗೂ ಬ್ರಯೊಫೈಟ ಮತ್ತು ಟೆರಿಡೋಫೈಟ ಎಂಬ ಇನ್ನೆರಡು ವಿಭಾಗಗಳನ್ನು ಒಟ್ಟುಗೂಡಿಸಿ ಕ್ರಿಪ್ಟೊಗ್ಯಾಮ್ಸ್ (ಹೂ ಬಿಡದ ಸಸ್ಯಗಳು) ಎಂದು ಕರೆಯಲಾಗುತ್ತದೆ.

ಕೆಳದರ್ಜೆಯ ಸಸ್ಯಗಳನ್ನು ಸೂಚಿಸುವುದಕ್ಕಾಗಿ ಹಂಗರಿಯ ಸಸ್ಯವಿಜ್ಞಾನಿ ಎಂಟ್ಲಿಕರ್ (1804-1849) ಎಂಬಾತ ಈ ಹೆಸರನ್ನು ಕೊಟ್ಟ (1836). ಈ ವಿಭಾಗದಲ್ಲಿ ಸುಮಾರು 90,000 ಪ್ರಭೇದಗಳಿವೆ. ಇವು ಹೂಗಳನ್ನಾಗಲೀ ಬೀಜಗಳನ್ನಾಗಲೀ ಉತ್ಪತ್ತಿಮಾಡುವುದಿಲ್ಲ. ಇವುಗಳ ದೇಹರಚನೆ ಅತ್ಯಂತ ಸರಳ ರೀತಿಯದು ; ಇದರಲ್ಲಿ ಬೇರು, ಕಾಂಡ, ಎಲೆ, ಮುಂತಾದ ಭಾಗಗಳು ರೂಪುಗೊಂಡಿಲ್ಲ. ಇಂಥ ಸಸ್ಯದೇಹಕ್ಕೆ ತ್ಯಾಲಸ್ ಎಂದು ಹೆಸರು. ಈ ಗುಂಪಿನ ಸಸ್ಯಗಳಲ್ಲಿ ವಾಹಕ ಅಂಗಾಂಶಗಳು (ವ್ಯಾಸ್ಕ್ಯುಲರ್ ಟಿಷ್ಯೂಸ್) ಇಲ್ಲ. ಸಂತಾನೋತ್ಪತ್ತಿಯ ಅಂಗಗಳು ಏಕಕೋಶಿಯವಾಗಿರುವುದು ಈ ಸಸ್ಯಗಳ ಒಂದು ಲಕ್ಷಣ. ದೇಹರಚನೆ ಆಕಾರ ಮತ್ತು ಗಾತ್ರಗಳಲ್ಲಿ ಪ್ರಭೇದಗಳ ನಡುವೆ ವ್ಯತ್ಯಾಸಗಳಿವೆಯಾದರೂ ಮುಖ್ಯ ಲಕ್ಷಣಗಳಲ್ಲಿ ಬಹಳ ಹೋಲಿಕೆಯನ್ನು ಕಾಣಬಹುದು. ತ್ಯಾಲೊಫೈಟ ಗುಂಪಿನ ಸಸ್ಯಗಳು ಹೆಚ್ಚಾಗಿ ನೀರಿನಲ್ಲಿ ಅಥವಾ ತೇವಾಂಶಗಳಿರುವ ಪ್ರದೇಶಗಳಲ್ಲಿ ಬೆಳೆಯುವುವು. ಪ್ರಪಂಚದ ಎಲ್ಲ ಭಾಗಗಳಲ್ಲೂ ಇವನ್ನು ಕಾಣಬಹುದು. ಅಳಸಾಗರಗಳ ತಳದಿಂದ ಹಿಡಿದು ಅತಿ ಎತ್ತರದ ಪರ್ವತಶಿಖರಗಳಲ್ಲೂ ಕೊರೆಯುವ ಮಂಜಿನಲ್ಲೂ ಬಿಸಿನಿರಿನ ಚಿಲುಮೆಗಳಲ್ಲೂ ಇವು ಕಂಡುಬರುತ್ತವೆ. ಇವುಗಳ ದೇಹರಚನೆಯಲ್ಲಿ ವೈವಿಧ್ಯ ಉಂಟು. ಇವು ಏಕಕೋಶ ಅಥವಾ ಬಹುಕೋಶ ಜೀವಿಗಳಾಗಿರಬಹುದು. ಕೆಲವು ಗುಂಡನೆಯ ಅಕಾರವಾಗಿದ್ದರೆ ಇನ್ನು ಕೆಲವು ಚಪ್ಪಟೆಯಾಗಿವೆ. ಸ್ವಾವಲಂಬಿಗಳೂ ಪರಾವಲಂಬಿಗಳೂ ಈ ಗುಂಪಿನಲ್ಲಿ ಉಂಟು. ಕೆಲವು ಕೊಲೆತಿನಿಗಳಾಗಿ (ಸ್ಯಾಪ್ರೋಫೈಟ್ಸ್) ಜೀವಿಸುವುದೂ ಉಂಟು.

ಪ್ರಜನನ : ಇದರಲ್ಲಿ ಮೂರು ವಿಧ ಉಂಟು : 1 ಕಾಯಜ ಪ್ರಜನನ (ವೆಜಿಟೇಟಿವ್ ರಿಪ್ರೋಡಕ್ಷನ್) : ಕೋಶ ವಿಭಜನೆ (ಸೆಲ್ ಡಿವಿಜನ್) ಮತ್ತು ಖಂಡೀಕರಣ (ಫ್ರಾಗ್‍ಮೆಂಟೇಷನ್)-ಇವು ಮುಖ್ಯ ಬಗೆಗಳು.

2 ಅಲೈಗಿಂಕ ಪ್ರಜನನ (ಏಸೆಕ್ಚ್ಯಯಲ್ ರಿಪ್ರೋಡಕ್ಷನ್) : ವಿವಿಧ ರೀತಿಯ ಬೀಜಕಗಳಿಂದ ಇದು ನಡೆಯುತ್ತದೆ. ಜಲಚರ ಸಸ್ಯಗಳಲ್ಲಿ ಜೂವೋಸ್ಟೋರ್ಸ್ ಎಂಬ ಚಲನಶಕ್ತಿಯುತ ಬೀಜಕಗಳು ಉತ್ಪತ್ತಿಯಾಗುತ್ತವೆ. ಆದರೆ ಭೂಸಸ್ಯಗಳ ಬೀಜಕಗಳಿಗೆ ಸ್ವಂತ ಚಲನೆಯಿಲ್ಲ. ಇವಕ್ಕೆ ಏಪ್ಲೆನೋಸ್ಟೋರ್ಸ್ ಎಂದು ಹೆಸರು.

3 ಲೈಗಿಂಕ ಪ್ರಜನನ (ಸೆಕ್ಚ್ಯುಯಲ್ ರಿಪ್ರೋಡಕ್ಷನ್) : ಗ್ಯಾಮೀಟುಗಳ (ಲಿಂಗಾಣುಗಳ) ಸಂಯೋಗದಿಂದ ಇದು ನಡೆಯುತ್ತದೆ. ಇದರಲ್ಲಿ ಮೂರು ವಿಧಗಳುಂಟು. (i) ಸಮಸಂಯುಗ್ಮನ (ಐಸಾಗಮಿ) ಅಥವ ಸಂಯುಗ್ಮನ (ಕಾಂಜುಗೇಷನ್) : ಈ ವಿಧದಲ್ಲಿ ಸಂಯೋಗ ಹೊಂದುವ ಗ್ಯಾಮೀಟುಗಳು ಅಕಾರ ಮತ್ತು ರಚನೆಗಳಲ್ಲಿ ಒಂದೇ ಅಗಿದ್ದರೂ ಗಾತ್ರದಲ್ಲಿ ಒಂದೇ ಅಗಿರುವುವು. (ii) ಅಸಮ ಸಂಯುಗ್ಮನ (ಅನೈಸಾಗಮಿ) : ಇದರಲ್ಲಿ ಸಂಯೋಗವಾಗುವ ಗ್ಯಾಮೀಟುಗಳು ಅಕಾರ ಮತ್ತು ರಚನೆಗಳಲ್ಲಿ ಒಂದೇ ಅಗಿದ್ದರೂ ಗಾತ್ರದಲ್ಲಿ ಮಾತ್ರ ಭಿನ್ನವಾಗಿರುತ್ತವೆ. (iii) ವಿಷಮ ಸಂಯುಗ್ಮನ (ಹೆಟರಾಗಮಿ) ; ಇದರಲ್ಲಿ ಸಂಯೋಗವಾಗಲಿರುವ ಗ್ಯಾಮೀಟುಗಳಲ್ಲಿ ಲಿಂಗಭೇದವಿರುತ್ತದೆ. ಗಂಡು ಗ್ಯಾಮೀಟುಗಳು ಅಂತೆರಿಡಿಯ ಎಂಬ ಜನನೆಂದ್ರಿಯಗಳಲ್ಲಿ ಉತ್ಪತ್ತಿಯಾಗುತ್ತವೆ. ಇವು ಚಿಕ್ಕಗಾತ್ರದವು. ಇವಕ್ಕೆ ಚಲನಶಕ್ತಿಯುಂಟು. ಅದರೆ ಸ್ತ್ರೀಲಿಂಗಾಣುಗಳು ಗಾತ್ರದಲ್ಲಿ ದೊಡ್ಡವಾಗಿದ್ದು ಊವೊಗೋನಿಯ, ಕಾರ್ಪೊಗೋನಿಯ ಅಥವಾ ಅಸ್ಕೊಗೋನಿಯ ಎಂಬ ಜನನೇಂದ್ರಿಯಗಳಲ್ಲಿ ಉತ್ಪತ್ತಿಯಾಗುತ್ತದೆ. ಇವಕ್ಕೆ ಚಲನಶಕ್ತಿಯಿಲ್ಲ. ಇಂಥ ಗಂಡು ಮತ್ತು ಹೆಣ್ಣು ಗ್ಯಾಮೀಟುಗಳ ಸಂಯೋಗಕ್ಕೆ ಓವಾಗಮಿ ಎಂಬ ಹೆಸರು ಉಂಟು.

ಸಮಸಂಯುಗ್ಮನ ಮತ್ತು ಅಸಮಸಂಯುಗ್ಮನಗಳಲ್ಲಿ ಗ್ಯಾಮೀಟುಗಳು ಸಸ್ಯ ದೇಹದಿಂದ ಬಿಡುಗಡೆಯಾಗುವುದರಿಂದ ಸಂಯೋಗವು ದೇಹದ ಹೊರಗೆ ನಡೆಯುತ್ತದೆ. ಅದರೆ ಓವಾಗಮಿ ವಿಧಾನದಲ್ಲಿ ಪುರುಷಾಣುಗಳು ಮಾತ್ರ ಬಿಡುಗಡೆಯಾಗಿ ನಿಷೇಚನವು ಸ್ತ್ರಿ ಲಿಂಗಾಣುವಿರುವ ಸಸ್ಯದಲ್ಲೇ ನಡೆಯುತ್ತದೆ. ಈ ನಿಷೇಚನದ ಫಲವಾಗಿ ಯುಗ್ಮಜವು (ಜೈಗೋಟ್) ಉತ್ಪತ್ತಿಯಾಗುವುದು. ಇದು ನೇರವಾಗಿ ಹೊಸಸಸ್ಯಕ್ಕೆ ಜನ್ಮ ಕೊಡಬಹುದು ಇಲ್ಲವೆ ಬೀಜಕಗಳ ಮೂಲಕ ಹೊಸಸಸ್ಯಗಳು ಹುಟ್ಟಬಹುದು. ಸಾಮಾನ್ಯವಾಗಿ ಪ್ರತಿಯೊಂದು ಯುಗ್ಮಜವು ಸಂಖ್ಯಾಕ್ಷೀಣ ವಿಧಾನದಿಂದ ವಿಭಜನೆಗೊಂಡು ನಾಲ್ಕು ನ್ಯೂಕ್ಲಿಯಸ್‍ಗಳನ್ನು ಉತ್ಪತ್ತಿ ಮಾಡುತ್ತದೆ. ಇವುಗಳಲ್ಲಿ ಮೂರು ನಶಿಸಿಹೋಗಬಹುದು ಅಥವಾ ನಾಲ್ಕು ಜೂವೋ ಸ್ಪೋರುಗಳು ರೂಪುಗೊಂಡು ಅವುಗಳಿಂದ ಹೊಸ ಸಸ್ಯಗಳು ರೂಪುಗೊಳ್ಳಬಹುದು. ಸಂಖ್ಯಾಕ್ಷೀಣ ವಿಭಜನೆಯಿಲ್ಲದೆಯೂ ಯುಗ್ಮಜಗಳು ಮೊಳೆಯುವ ಸಂದರ್ಭಗಳುಂಟು.

ಲೈಗಿಂಕ ಪ್ರಜನನವನ್ನು ತೋರುವ ಎಲ್ಲ ತ್ಯಾಲೊಫೈಟ ಸಸ್ಯಗಳ ಜೀವನ ಚರಿತ್ರೆಯಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. ಬೀಜಕಗಳನ್ನು ಉತ್ಪತ್ತಿಮಾಡುವ ಬೀಜಕಜನಕ ಪೀಳಿಗೆ (ಸ್ಟೋರೋಫಿಟಿಕ್ ಜನರೇಷನ್) ಒಂದು ಹಂತವಾದರೆ ಗ್ಯಾಮಿಟುಗಳನ್ನು ಉತ್ಪಾದಿಸುವ ಲಿಂಗಾಣು ಜನಕ ಪೀಳಿಗೆ (ಗ್ಯಾಮೀಟೋಫಿಟಿಕ ಜನರೇಷನ್) ಇನ್ನೊಂದು. ಇವೆರಡು ಒಂದನ್ನೊಂದು ಪರ್ಯಾಯವಾಗಿ ಅನುಸರಿಸುತ್ತವೆ. ಈ ಪ್ರವೃತ್ತಿಗೆ ಪೀಳಿಗೆಗಳ ಪರ್ಯಾಯ (ಅಲ್ಟರ್ ನೇಷನ್ ಅಫ್ ಜನರೇಷನ್ಸ್) ಎಂದು ಹೆಸರು.

ತ್ಯಾಲೊಫೈಟ ಸಸ್ಯವಿಭಾಗ ಅಲ್ಜೀ (ಪಾಚಿಗಳು) ಫಂಜೈ (ಶಿಲೀಂಧ್ರಗಳು).ಕಲ್ಲುಹೂಗಳು, ಬ್ಯಾಕ್ಟೀರಿಯ ಮತ್ತು ವೈರಸ್‍ಗಳನ್ನು ಒಳಗೊಂಡಿದೆ.

1 ಪಾಚಿಗಳು : ಪಾಚಿಗಳಲ್ಲಿ ಕ್ಲೋರೊಫಿಲ್ ಎಂಬ ಹಸಿರು ವರ್ಣವಿರುವುದರಿಂದ ಇವು ತಮ್ಮ ಅಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲವು. ಇವುಗಳ ಬಣ್ಣ ಸಾಮಾನ್ಯವಾಗಿ ಹಸಿರು. ಕೆಲವು ಪಾಚಿಗಳಲ್ಲಿ ಕ್ಲೋರೊಫಿಲ್ಲಿನ ಜೊತೆಗೆ ಕಂದು ಅಥವಾ ಕೆಂಪು ಬಣ್ಣದ ವರ್ಣಕಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹಸಿರುಬಣ್ಣದ ಪ್ರಾಬಲ್ಯ ಕಡಿಮೆಯಾಗಿ ಗಿಡಗಳು ಕಂದು, ಕೆಂಪು ಮುಂತಾದ ಬಣ್ಣಗಳನ್ನು ತಳೆಯುವುದುಂಟು.

ಪಾಚಿಗಳಲ್ಲಿ ಸುಮಾರು 20,000 ಪ್ರಭೇದಗಳುಂಟು. ಕೆರೆ, ಕೊಳೆ, ನದಿ, ಸಮುದ್ರ-ಹೀಗೆ ಎಲ್ಲ ವಿಧದ ನೀರಿನ ಅಸರೆಗಳಲ್ಲಿ ಇವು ವಾಸಿಸಬಲ್ಲವು. ಕೆಲವು ನೀರಿನ ಮೇಲೆ ಇದ್ದು ತೇಲುಜೀವನ ನಡೆಸಿಸದರೆ ಇನ್ನು ಕೆಲವು ಕೆಲವು ತಳಭಾಗದಲ್ಲಿ ಬೇರೂರಿರುತ್ತವೆ. ಇವು ಹಸಿಯಾದ ಮಣ್ಣು, ಗೋಡೆ ಬಂಡೆ, ನೀರ್ಗೊಳವೆ ಹಾಗೂ ಮರ ಮೊದಲಾದ ತೇವಪೂರಿತ ಸ್ಥಳಗಳಲ್ಲಿ ಬೆಳೆಯುತ್ತವೆ. ಕೆಲವು ಪಾಚಿಗಳು ಉನ್ನತ ವರ್ಗದ ಸಸ್ಯಗಳೊಂಗೆ ಪರಸ್ಪರಾವಲಂಬಿ ಜೀವನವನ್ನು ನಡೆಸುತ್ತವೆ. ಫೈಟೋಪ್ಲಾಂಕ್ಟನ್ ಎಂಬ ಸೂಕ್ಷ್ಮ ಸಸ್ಯಗಳೂ ಈ ವರ್ಗಕ್ಕೆ ಸೇರುತ್ತವೆ.

ಪಾಚಿಗಳು ಬಹು ಸರಳಜೀವಿಗಳು. ಉದಾಹರಣೆಗೆ ಕ್ಲ್ಯಾಮಿಡೊಮೊನಾಸ್ ಎಂಬುದು ಏಕಕೋಶ ಜೀವಿ. ಇದಕ್ಕೆ ಸಾಮಥ್ರ್ಯ ಉಂಟು. ಚಲನೆಗೆ ಸಹಾಯಕವಾಗುವಂತೆ ಒಂದು ಜೊತೆ ಕಶ (ಫ್ಲಾಜೆಲ) ಉಂಟು. ಕ್ಲೊರೆಲ ಎಂಬುದು ಏಕಕೋಶ ಜೀವಿಯಾದರೂ ಇದಕ್ಕೆ ಚಲನ ಸಾಮಥ್ರ್ಯ ಇಲ್ಲ. ಸ್ವಲ್ಪ ಉನ್ನತ ವರ್ಗದ ಪಾಚಿಗಳಲ್ಲಿ ಜೀವಕೋಶಗಳು ಸಂಘಟನೆಗೊಂಡು ವಿವಿಧ ರೀತಿಯ ನಿವಾಹಗಳನ್ನು (ಕಾಲನಿ) ರೂಪಿಸಿಗೊಳ್ಳುವುವು. ಕೆಲವು ಚಪ್ಪಟೆಯಾಗಿ ತಟ್ಟೆಯಾಕರವಾದವಾಗಿದ್ದರೆ ಇನ್ನು ಕೆಲವು ಟೊಳ್ಳು ಗೋಳದಂತೆ ಇವೆ. ದಾರದಂತಿರುವ ಕೆಲವು ಪಾಚಿಗಳು ಕವಲುಗಳುಳ್ಳವು. ಹೆಚ್ಚು ವ್ಯವಸ್ಥಿತವಾದ ದೆಹರಚನೆಯುಳ್ಳ ಸಮುದ್ರವಾಸಿ ಪಾಚಿಗಳಲ್ಲಿ ಉನ್ನತವರ್ಗದ ಸಸ್ಯಗಳಲ್ಲಿರುವ ಬೇರು, ಕಾಂಡ ಎಲೆಗಳ ರಚನೆಯನ್ನು ಹೋಲುವ ಅಂಗಗಳುಂಟು. ಕೆಲವು ಪಾಚಿಗಳಲ್ಲಿ ಸಸ್ಯದ ತಳಭಾಗವು ಚಪ್ಪಟೆಯಾಗಿರುತ್ತದೆ ಮತ್ತು ಮೇಲ್ಭಾಗವು ಕವಲುಗಳುಳ್ಳ ದಾರದೋಪಾದಿಯಲ್ಲಿರುತ್ತದೆ. ಇದನ್ನು ಹೆಟರೋಟ್ರೈಕಸ್ ರಚನೆ ಎನ್ನಲಾಗುತ್ತದೆ.

ಪಾಚಿಗಳ ಕೋಶಭಿತ್ತಿ ಸೆಲ್ಯುಲೋಸಿನಿಂದ ರಚಿತವಾಗಿದೆ. ದ್ಯುತಿಸಂಶ್ಲೇಷಣ ಕ್ರಿಯೆಗೆ ನೆರವಾಗುವ ಕ್ಲೋರೊಫಿಲ್ ಕ್ಲೋರೊಪ್ಲಾಸ್ಟ್ ಅಥವಾ ಕ್ರೊಮ್ಯಾಟೊಫೆÇೀರ್ ಎಂಬ ಜೀವಕೋಶಿಕ ಅಂಗಕಗಳಲ್ಲಿ ಸ್ಥಿತವಾಗಿವೆ. ಪ್ರಭೇದಗಳಿಗೆ ಅನುಗುಣವಾಗಿ ಕ್ಲೋರೊಪ್ಲಾಸ್ಟುಗಳ ರಚನೆ, ಸಂಖ್ಯೆ ಮತ್ತು ಸ್ಥಾನ ಬದಲಾಗುತ್ತದೆ. ಪೈರೀನಯಿಡ್ ಎಂಬ ಅಂಗಕ ಕ್ಲೋರೊಪ್ಲಾಸ್ಟುಗಳಲ್ಲಿ ಕಂಡುಬರುತ್ತದೆ. ನೀರಿನಲ್ಲಿ ಬೆಲೆಯುವ ಪಾಚಿಗಳು ದ್ಯುತಿಸಂಶ್ಲೇಷಣ ಕ್ರಿಯೆಗೆ ಬೇಕಾಗುವ ನೀರನ್ನು ಅಬಿಸರಣ ವಿಧಾನದಿಂದಲೂ (ಅಸ್ಮಾಸಿಸ್) ಕಾರ್ಬನ್ ಡೈಆಕ್ಸೈಡನ್ನು ವಿಸರಣೆಯಿಂದಲೂ ಪಡೆಯುತ್ತವೆ. ಅದರೆ ನೆಲದ ಮೇಲಿನ ಪಾಚಿಗಳಿಗೆ ನೀರು ಭೂಮಿಯಿಂದಲೂ ಕಾರ್ಬನಡೈಆಕ್ಸೈಡ್ ಗಾಳಿಯಿಂದಲೂ ಸಿಗುತ್ತದೆ. ಕೆಲವು ಪಾಚಿಗಳಲ್ಲಿ ಕ್ಲೋರಪಫಿಲ್ ಅಲ್ಲದೆ ಕ್ಯಾರಟೀನ್, ಜ್ಯಾಮತಫಿಲ್ ಎಂಬ ಇತರ ವರ್ಣಕಗಳೂ ಫೈಕೊಬಿಲಿನ್ ಫ್ಯೂಕೊಜ್ಯಾಂತಿನ್ ಮೊದಲಾದ ವಿಶಿಷ್ಟ ಬಗೆಯ ವರ್ಣಕಗಳೂ ಇರುವುವು. ಹಸಿರು ಪಾಚಿಗಳಲ್ಲಿ ಪಿಷ್ಟರೂಪದಲ್ಲಿ ಅಹಾರ ಶೇಖರಣೆಯಾದರೆ ಬೇರೆ ಪಾಚಿಗಳಲ್ಲಿ ಸಯನೋಫೈಸಿಯನ್ ಪಿಷ್ಟ, ಫ್ಲಾರಿಡಿಯನ್ ಪಿಷ್ಟ, ಲ್ಯಾಮಿನೇರಿನ್, ಮ್ಯಾನಿಟಾಲ್ ಎಂಬ ಇತರ ಪದಾರ್ಥಗಳ ರೂಪದಲ್ಲಿ ಸಂಗ್ರಹಗೊಳ್ಳುವುವು. ಈ ಗುಂಪಿನ ಸಸ್ಯಗಳು ಕೊಬ್ಬು ಮತ್ತು ಪ್ರೋಟೀನುಗಳನ್ನು ಕಾರ್ಬೊಹೈಡ್ರೇಟಿನಿಂದ ಸಂಶ್ಲೇಷಿಸಬಲ್ಲವು. ಆದ್ದರಿಂದ ಇವುಗಳ ಚಯಾಪಚಯನಕ್ರಿಯೆ ಇತರ ಉನ್ನತಮಟ್ಟದ ಸಸ್ಯಗಳ ಕ್ರಿಯೆಯನ್ನು ಬಹುವಾಗಿ ಹೋಲುತ್ತದೆ.
ಕೆಲವು ಪಾಚಿಗಳಲ್ಲಿ ಜೀವಕೋಶಗಳ ನಡುವೆ ಕೋಶಭಿತ್ತಿಯಿರುವುದಿಲ್ಲ. ಇಡೀ ದೇಹ ನಳಿಕೆಯಂತಿದ್ದು ಅನೇಕ ನ್ಯೂಕ್ಲಿಯಸ್‍ಗಳಿಂದ ಕೂಡಿದೆ.

ಪ್ರಜನನ ಮೇಲೆ ಹೇಳಿದ ಮೂರು ವಿಧಗಳಲ್ಲಿ ಜರುಗುತ್ತದೆ.

ಪಾಚಿಗಳನ್ನು ಅವುಗಳ ಬಾಹ್ಯ ರೂಪರಚನೆಗೆ ಮತ್ತು ಕೆಲವು ಶರೀರ ವೈಜ್ಞಾನಿಕ ಕ್ರಿಯೆಗಳ ಅಧಾರದ ಮೇಲೆ ಆರು ಮುಖ್ಯ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

1 ಸಯನೋಫೈಸೀ : ಈ ವರ್ಗದ ಸಸ್ಯಗಳಲ್ಲಿ ಕ್ಲೋರೊಫಿಲ್ ಜೊತೆಗೆ ಫೈಕೊಸಯನಿಸ್ ಎಂಬ ನೀಲಿ ವರ್ಣಕ ಇರುವುದರಿಂದ ಇವು ಹಸಿರುಮಿಶ್ರಿತ ನೀಲಿ ಬಣ್ಣದಾಗಿ ಕಾಣುತ್ತದೆ. ದ್ಯುತಿಸಂಶ್ಲೆಷನೆಯಿಂದ ಸಯನೋಫೈಸಿಯನ್ ಪಿಷ್ಟ ಉತ್ಪತ್ತಿಯಾಗುತ್ತದೆ. ಲೈಗಿಂಕ ಪ್ರಜನನ ಬಹಳ ವಿರಳ. ಬೀಜಕಗಳಿಗೆ ಚಲನೆಯ ಸಾಮಥ್ರ್ಯ ಇಲ್ಲ. ಉದಾಹರಣೆಗಳು : ಗ್ಲಿಯೋಕ್ಯಾಪ್ಸ್, ಅಸಿಲಟೊರಿಯ, ನಸ್ಟಕ್ ಮೊದಲಾದವು.

2 ಕ್ಲೋರೊಫಿಸೀ : ಈ ಗುಂಪಿನ ಸಸ್ಯಗಳಲ್ಲಿ ಕ್ಲೋರೊಫಿಲ್ ಅತಿ ಹೆಚ್ಚು ಪ್ರಮಾಣದಲ್ಲಿರುವುದರಿಂದ ಇವು ಕಡುಹಸಿರು ಬಣ್ಣದವಾಗಿವೆ. ದ್ಯುತಿಸಂಶ್ಲೇಷನೆಯಿಂದ ಪಿಷ್ಟ ಉತ್ಪನ್ನವಾಗುತ್ತದೆ. ಚಲನಸಾಮಥ್ರ್ಯವುಳ್ಳ ಬೀಜಕಗಳು ಉಂಟು. ಪ್ರಜನನ ಮೂರು ವಿಧಗಳಿಂದ ನಡೆಯುತ್ತದೆ. ಕ್ಲ್ಯಾ,ಮಿಡೊಮೊನಾಸ್, ವಾಲ್ವಾಕ್ಸ್, ಯುಲೋತ್ರಿಕ್ಸ್, ಸ್ಟೈರೊಗೈರ ಮೊದಲಾದವು ಈ ವರ್ಗಕ್ಕೆ ಸೇರಿವೆ.

3 ಜ್ಯಾóಂತಫೈಸೀ : ಜ್ಯಾóಂತಫಿಲ್ ಎಂಬ ಹಳದಿ ವರ್ಣಕ ಹೆಚ್ಚಾಗಿರುವುದರಿಂದ ಜೀವಕೋಶದಲ್ಲಿನ ಕ್ಲೋರೊಪ್ಲಾಸ್ಟ್‍ಗಳು ಹಳದಿಮಿಶ್ರಿತ ಹಸಿರು ಬಣ್ಣವಾಗಿ ಗೋಚರಿಸುತ್ತವೆ. ಅಹಾರ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ. ಬಾಟ್ರಿಡಿಯಮ್ ಮತ್ತು ವಾಕೀರಿಯ ಮುಖ್ಯ ಉದಾಹರಣೆಗಳು.

4 ಬ್ಯಾಸಿಲೇರಿಯೊಫೈಸೀ : ಇವಕ್ಕೆ ಡಯಾಟಮ್ಸ್ ಎಂಬ ಸಾಮಾನ್ಯ ಬಳಕೆಯ ಹೆಸರುಂಟು. ಇವು ಸೂಕ್ಷ್ಮಗಾತ್ರದವು. ಹೊಂಬಣ್ಣವುಳ್ಳವು. ಇವುಗಳಲ್ಲಿರುವ ವರ್ಣಕ ಡೈಯಾಟಮಿನ್, ಉಪ್ಪು ನೀರಿನಲ್ಲೂ ಸಿಹಿನೀರಿನಲ್ಲೂ ಇವು ವಾಸಿಸುತ್ತವೆ.

	ಫಿಯೋಫೈಸೀ: ಎಕ್ಟೊಕಾರ್ಪಸ್, ಡಿಕ್ಟಯೋಟ, ಫ್ಯೂಕಸ್, ಸಾರ್‍ಗ್ಯಾಸಮ್, ಲ್ಯಾಮಿನೇರಿಯ ಎಂಬವು ಈ ಗುಂಪಿನ ಉದಾಹರಣೆಗಳು. ಇವುಗಳಲ್ಲಿ ಫ್ಯೂಕೊಜ್ಯಾóಂತಿನ್ ಎಂಬ ಕಂದುವರ್ಣಕ ಹೆಚ್ಚಾಗಿರುವುದರಿಂದ ಇವು ಕಂದು ಬಣ್ಣದವಾಗಿವೆ. ಇವಕ್ಕೆ ಕಂದುಪಾಚಿಗಳೆಂದು ಹೆಸರು. ಬಹುಶರ್ಕರ ಮತ್ತು ಕೊಬ್ಬಿನ ರೂಪದಲ್ಲಿ ಆಹಾರಶೇಖರಗೊಳ್ಳುವುದು. ಚಲನಸಾಮಥ್ರ್ಯವುಳ್ಳ ಬೀಜಕ ಮತ್ತು ಗ್ಯಾಮೀಟುಗಳಿಂದ ಪ್ರಜನನ ನಡೆಯುತ್ತದೆ.

	ರೋಡೊಫೈಸಿ: ಫೈಕೊಎರಿತ್ರಿನ್ ಎಂಬ ಕೆಂಪುವರ್ಣಕ ಕ್ಲೋರೊಫಿಲ್ಲಿನ ಹಸಿರುಬಣ್ಣವನ್ನು ಮರೆಮಾಡುವುದರಿಂದ ಈ ಗುಂಪಿನ ಸಸ್ಯಗಳು ಕೆಂಪು ಬಣ್ಣದವಾಗಿವೆ. ಪಿಷ್ಟದಂಥ ಒಂದು ವಿಧದ ಬಹುಶರ್ಕರದ ರೂಪದಲ್ಲಿ ಆಹಾರ ಸಂಗ್ರಹಗೊಳ್ಳುವುದು. ಬ್ಯಾಟ್ರಕೋಸ್ಪರ್ಮಮ್ ಮತ್ತು ಪಾಲಿಸೈಫೋನಿಯಗಳು ಸಾಮಾನ್ಯವಾಗಿ ಕಂಡುಬರುವ ಕೆಂಪುಪಾಚಿಗಳು.

	II ಶಿಲೀಂಧ್ರಗಳು: ತ್ಯಾಲೊಫೈಟ ವಿಭಾಗದ ಇನ್ನೊಂದು ಮುಖ್ಯ ಉಪವಿಭಾಗ. ಇವುಗಳ ಜೀವಕೋಶಗಳಲ್ಲಿ ಕ್ಲೋರೊಫಿಲ್ ಇಲ್ಲ. ಆದ್ದರಿಂದ ಇವು ತಮ್ಮ್ಮ ಆಹಾರವನ್ನು ತಾವೇ ತಯರಿಸಿಕೊಳ್ಳಲಾರವು. ಇತರ ಜೀವಂತ ಮತ್ತು ಸತ್ತ ಸಸ್ಯ ಹಾಗೂ ಪ್ರಾಣಿಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತವೆ. ಇವನ್ನು ಅನುಕ್ರಮವಾಗಿ ಪರಾವಲಂಬಿ ಮತ್ತು ಕೊಳೆತಿನಿಗಳೆಂದು ಕರೆಯಲಾಗುತ್ತದೆ. ಶಿಲೀಂಧ್ರಗಳಲ್ಲಿ ಪರಸ್ಪರಾವಲಂಬ ಜೀವನವೂ (ಸಿಂಬಯೋಸಿಸ್) ಅಲ್ಲದಿಲ್ಲ.

	ಶಿಲೀಂಧ್ರಗಳು ಎಲ್ಲ ರೀತಿಯ ಪರಿಸರಗಳಲ್ಲೂ ಬೆಳೆಯಬಲ್ಲವು. ಇವು ಸತ್ತ ಹಗೂ ಕೊಳೆಯುತ್ತಿರುವ ಸಸ್ಯ, ಪ್ರಾಣಿ, ಪ್ರಾಣಿಗಳ ಕಲ್ಮಷ, ಜೀವಂತ ಮತ್ತು ಸತ್ತ ಕೀಟ, ಬಟ್ಟೆ, ಚರ್ಮ, ಆಹಾರ ಪದಾರ್ಥ ಮತ್ತಿತರ ಸಾವಯವ ವಸ್ತುಗಳ ಮೇಲೆ ಬೆಳೆಯುತ್ತವೆ. ಇವು ಶೋಷಣಾವಯವಗಳನ್ನು (ಹಾಸ್ಟೋರಿಯ) ಪಡೆದಿರುವುದರಿಂದ ಆತಿಥೇಯ ಜೀವಿಯಿಂದ ಆಹಾರವನ್ನು ಸುಲಭವಾಗಿ ಹೀರಿಕೊಳ್ಳಬಲ್ಲವು.

	ಇವುಗಳಲ್ಲಿ ಕೆಲವು ಏಕಕೋಶ ಜೀವಿಗಳು. ಉಳಿದವು ಬಹುಕೋಳ ಜೀವಿಗಳು. ದೇಹರಚನೆ ಸರಳವಾಗಿದ್ದು, ಕವಲೊಡೆಯದ ಅಥವಾ ಕವಲೊಡೆದಿರುವ ಎಳೆಗಳಿಂದ ಕೂಡಿದೆ. ಇದಕ್ಕೆ ಮೈಸೀಲಿಯಮ್ ಎಂದ ಹೆಸರು. ಮೈಸೀಲಿಯಮಿನ ಪ್ರತಿಯೊಂದು ಎಳೆಯನ್ನು ಹೈಫ ಎಂದು ಕರೆಯಲಾಗುತ್ತದೆ. ಕೆಲವು ಶಿಲೀಂಧ್ರಗಳು ವರ್ಣರಹಿತವಾಗಿದ್ದರೆ ಇನ್ನು ಕೆಲವು ವಿವಿಧ ಬಣ್ಣಗಳಿಂದ ಕೂಡಿರುತ್ತವೆ. ಜೀವರಸ ಅನೇಕ ನ್ಯೂಕ್ಲಿಯಸ್‍ಗಳುಳ್ಳದ್ದು. ಕೆಲವು ಶಿಲೀಂಧ್ರಗಳ ಹೈಫಗಳಲ್ಲಿ ಅಡ್ಡಭಿತ್ತಿಗಳಿಲ್ಲ. ಈ ಸ್ಥಿತಿಗೆ ಸೀನೋಸಿಟಿಕ್ ಎಂದು ಹೆಸರು. ಇನ್ನು ಕೆಲವು ಶಿಲೀಂಧ್ರಗಳಲ್ಲಿರುವ ಅಡ್ಡಭಿತ್ತಿಗಳಲ್ಲಿ ರಂಧ್ರವಿರುವುದುಂಟು. ಮೈಸೀಲಿಯಮಿನ ಕವಲುಗಳು ವಿಶಾಲವಾಗಿ ಹರಡಿಕೊಂಡಿರುವುದರಿಂದ ಈ ಜೀವಿಗಳು ತಮ್ಮ ಪೋಷಕಜೀವಿಗಳಿಂದ ಆಹಾರವನ್ನು ಸುಲಭವಾಗಿ ಹೀರಬಹುದಾಗಿದೆ.

	ಹೈಫಗಳ ಭಿತ್ತಿ ಸಾಮಾನ್ಯವಾಗಿ ಕೈಟಿನ್ ಎಂಬ ಪದಾರ್ಥದಿಂದ ರಚಿತವಾಗಿದೆ. ಅಲ್ಲದೆ ಕ್ಯಾಲೋಸ್, ಲಿಗ್ನಿನ್ ಮೊದಲಾದ ಸಾವಯವ ವಸ್ತುಗಳು ಇದರಲ್ಲಿ ಬೆರೆತಿರುವುವು. ಕೆಲವು ಶಿಲೀಂಧ್ರಗಳಲ್ಲಿ ಸೆಲ್ಯುಲೋಸ್ ಇದೆಯೆಂದು ಭಾವಿಸಲಾಗಿದೆ. ಆಹಾರ ಗ್ಲೈಕೊಜನ್ ರೂಪದಲ್ಲಿ ಸಂಗ್ರಹವಾಗುವುದು.

	ಸಂದರ್ಭಕ್ಕೆ ಅನುಗುಣವಾಗಿ ಮೈಸೀಲಿಯಮ್ ಮಾರ್ಪಾಟಾಗುತ್ತದೆ. ಕೆಲವೊಮ್ಮೆ ಇದು ಎಷ್ಟು ದಟ್ಟವಾಗಿ ಬೆಳೆದಿರುತ್ತದೆಂದರೆ ಗಟ್ಟಿಯಾದ ಸ್ಟ್ರೋಮ ಎಂಬ ರಚನೆ ರೂಪುಗೊಳ್ಳುವುದುಂಟು. ಇದರಲ್ಲಿ ಹೈಫಗಳನ್ನು ಪ್ರತ್ಯೇಕಿಸಿ ಗುರುತಿಸಲಾಗುವುದಿಲ್ಲ. ಮೈಸೀಲಿಯಮಿನ ಎಳೆಗಳು ಹೆಣೆದುಕೊಂಡು ಪ್ಲಕ್ಟೆಂಕಿಮ ಎಂಬ ರಚನೆಯನ್ನುಂಟುಮಾಡುವುದಿದೆ. ಉನ್ನತ ವರ್ಗದ ಸಸ್ಯಗಳ ಪರೆಂಕಿಮ ಅಂಗಾಶವನ್ನು ಹೋಲುವ ರಚನೆಯನ್ನೂ ಇವು ತೋರುವುದುಂಟು. ಇದಕ್ಕೆ ಸೂಡೊಪರೆಂಕಿಮ ಎಂದು ಹೆಸರು. ಅಲ್ಲದೆ ಅನಾನುಕೂಲ ಪರಿಸ್ಥಿತಿಗಳನ್ನು ಎದುರಿಸುವುದಕ್ಕಾಗಿ ಪ್ರತಿರೋಧಕ ಸಾಮಥ್ರ್ಯವುಳ್ಳ ಸ್ಕ್ಲೀರೋಶಿಯ ಎಂಬ ರಚನೆಗಳು ಉತ್ಪತ್ತಿಯಾಗುವುದುಂಟು.

	ಶಿಲೀಂಧ್ರಗಳ ಪ್ರಜನನ ಕ್ರಿಯೆಯಲ್ಲೂ ಮೂರು ಬಗೆಗಳಿವೆ. ಅಲೈಂಗಿಕ ಮತ್ತು ಲೈಂಗಿಕ ವಿಧಾನಗಳು ಒಂದನ್ನೊಂದು ಪರ್ಯಾಯವಾಗಿ ಅನುಸರಿಸಿದರೆ ಮಾತ್ರ ಜೀವನಚರಿತ್ರೆ ಸಂಪೂರ್ಣವಾಗುವುದು. ಬರಿಯ ಅಲೈಂಗಿಕ ಪ್ರಜನನ ಹಂತವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಒಂದು ಶಿಲೀಂಧ್ರದ ಇಡೀ ದೇಹ ಪ್ರಜನನಕ್ರಿಯೆಯಲ್ಲಿ ಭಾಗವಹಿಸಿದರೆ ಅಂಥ ಜೀವಿಯನ್ನು ಹಾಲೊಕಾರ್ಪಿಕ್ ಎಂದೂ ಯಾವುದಾದರೊಂದು ನಿರ್ದಿಷ್ಟ ಭಾಗ ಮಾತ್ರ ಪ್ರಜನನ ಅಂಗಗಳನ್ನು ಉತ್ಪಾದಿಸಿದರೆ ಅಂಥ ಶಿಲೀಂಧ್ರವನ್ನು ಯೂಕಾರ್ಪಿಕ್ ಎಂದೂ ಕರೆಯಲಾಗುತ್ತದೆ.

	ಮೈಸೀಲಿಯಮಿನ ಎಳೆಗಳು ತುಂಡುಗಳಾಗಿ ಭಿನ್ನಗೊಂಡು ಬೇರೆ ಬೇರೆಯಾಗಿ ಹೊಸ ಮೈಸೀಲಿಯಮನ್ನು ರಚಿಸುತ್ತದೆ. ಇದೇ ಖಂಡೀಕರಣ. ಇದರರೆ ಕೆಲವೊಮ್ಮೆ ಆಯ್ಡಿಯ ಮತ್ತು ಕ್ಲ್ಯಾಮಿಡೊಸ್ಟಫೋರುಗಳೆಂಬ ಬೀಜಕಗಳಲ್ಲಿ ರೂಪುಗೊಳ್ಳುವುದುಂಟು. 

	ಅಲೈಂಗಿಕ ಪ್ರಜನನ ಬೀಜಕಗಳಿಂದ ನಡೆಯುತ್ತದೆ. ಬೀಜಕಗಳಲ್ಲಿ ಜೂವೋಸ್ಟೋರುಗಳೂ ಚಲನೆಯಿಲ್ಲದ ಏಪ್ಲೆನೋಸ್ಟೋರ್ಸ್ ಅಥವಾ ಕೊನಿಡಿಯ ಎಂಬ ಬೀಜಕಗಳೂ ಇವೆ. ಜೂóವೋಸ್ಟೋರು ಮತ್ತು ಏಪ್ಲೆನೋಸ್ಟೋರುಗಳು ಚೀಲದಂಥ ಸ್ಟೊರ್ಯಾಂಜಿಯ ಎಂಬ ರಚನೆಗಳಲ್ಲಿ ಉತ್ಪತ್ತಿಯಾಗುತ್ತವೆ. ಕೊನಿಡಿಯಗಳು ಕೊನಿಡಿಯೊಫೋರುಗಳ ತುದಿಗಳಲ್ಲಿ ಸರಪಳಿಯಂತೆ ಹುಟ್ಟುವುವು. ಕೊನಿಡಿಯೊಫೋರುಗಳ ಜೋಡಣಾರೀತಿ ಮತ್ತು ಅವು ಕೊನಿಡಿಯಗಳನ್ನು ಉತ್ಪತ್ತಿ ಮಾಡುವ ವಿಧಾನಗಳ ಆಧಾರದ ಮೇಲೆ ಇವನ್ನು ಸಿನ್ನೆಮ, ಸ್ಟೋರೊಡೋಕಿಯಮ್, ಪಿಕ್ನಿಡಿಯಮ್ ಎಂದು ವಿಂಗಡಿಸಲಾಗಿದೆ.

	ಲೈಂಗಿಕ ಪ್ರಜನನದ ಎರಡು ನ್ಯೂಕ್ಲಿಯಸ್‍ಗಳ ಸಂಯೋಗದಿಂದ ನಡೆಯುತ್ತದೆ. ನಿರ್ದಿಷ್ಟ ಗ್ಯಾಮೀಟುಗಳು ಇರಬಹುದು ಅಥವಾ ಇಲ್ಲದಿರಬಹುದು. ಶಿಲೀಂಧ್ರಗಳು ಏಕಲಿಂಗಿಗಳು ಅಥವಾ ದ್ವಿಲಿಂಗಿಗಳು. ಇವನ್ನು ಅನುಕ್ರಮವಾಗಿ ಹೆಟರೂತ್ಯಾಲಿಕ್ ಮತ್ತು ಹೋಮೊತ್ಯಾಲಿಕ್ ಎಂದು ಹೆಸರಿಸಲಾಗುತ್ತದೆ. ಸಂಯೋಗವಾಗುವ ಗ್ಯಾಮೀಟುಗಳ ರಚನೆ, ಆಕಾರ ಗಾತ್ರಗಳ ಆಧಾರದ ಮೇಲೆ ಐಸಾಗಮಿ, ಅನೈಸಾಗಾಮಿ ಮತ್ತು ಓವಾಗಮಿ ಎಂಬ ಮೂರು ವಿಧಗಳನ್ನು ಗುರುತಿಸಬಹುದು. ಆದರೆ ಉಚ್ಚವರ್ಗದ ಶಿಲೀಂಧ್ರಗಳಲ್ಲಿ ಗ್ಯಾಮೀಟುಗಳೇ ರೂಪುಗೊಳ್ಳುವುದಿಲ್ಲ. ನಿಷೇಚನ ಕ್ರಿಯೆಗಳಲ್ಲಿ ಮೊದಲು ಎರಡು ಜೀವಕೋಶಗಳ ಜೀವರಸ ಮಾತ್ರ ಕೂಡಿಕೊಳ್ಳುತ್ತದೆ. ಇದಕ್ಕೆ ಪ್ಲಾಸ್ಮಾಗಮಿ ಎಂದು ಹೆಸರು. ಅನಂತರ ಈ ಜೀವಕೋಶಗಳ ನ್ಯೂಕ್ಲಿಯಸುಗಳು ಸಂಯೋಗವಾಗುತ್ತದೆ. ಇದು ಕ್ಯಾರಿಯಾಗಮಿ. ಪ್ಲಾಸ್ಮಾಗಮಿಯಾದ ತತ್‍ಕ್ಷಣವೇ ಕ್ಯಾರಿಯಾಗಮಿ ನಡೆಯಬಹುದು. ಇಲ್ಲವೇ ಕ್ಯಾರಿಯಾಗಮಿ ಸ್ವಲ್ಪ ತಡವಾಗಿ ಜರುಗಬಹುದು. ಈ ಹಂತದಲ್ಲಿ ಸಂಯೋಗವಾಗಲಿರುವ 2 ನ್ಯೂಕ್ಲಿಯಸುಗಳು ಜೊತೆಯಾಗಿ ಇರುವುದರಿಂದ ಇವುಗಳನ್ನು ಡೈಕ್ಯಾರಿಯಾನ್ಸ್ ಎಂದೂ ಈ ಹಂತವನ್ನು ಡೈಕ್ಯರಿಯಾಟಿಕ್ ಫೇಸ್ ಎಂದೂ ಕರೆಯಲಾಗುತ್ತದೆ. ಈ ಎರಡು ನ್ಯೂಕ್ಲಿಯಸುಗಳ ಸಂಯೋಗಾನಂತರ ಸಂಖ್ಯಾಕ್ಷೀಣ ಕೋಳಸ ವಿಭಜನೆ ನಡೆಯುತ್ತದೆ.

	ಓವಾಗಮಿಯಲ್ಲಿ ಪುರುಷ ಜನನೇಂದ್ರಿಯವನ್ನು ಆಂತರಿಡಿಯಮ್ ಎಂದೂ ಸ್ತ್ರೀ ಜನನೇಂದ್ರಿಯವನ್ನು ಓವಾಗೋನಿಯಮ್ ಅಥವಾ ಆಸ್ಕೊಗೋನಿಯಮ್ ಎಂದೂ ಕರೆಯಲಾಗುವುದು. ಉನ್ನತವರ್ಗದ ಶಿಲೀಂಧ್ರಗಳಲ್ಲಿ ಜನನೇಂದ್ರಿಯಗಳ ಬದಲಾಗಿ ಬೇರೆ ಬೇರೆ ಲಿಂಗಗಳಿಗೆ ಸೇರಿದ ನ್ಯೂಕ್ಲಿಯಸ್‍ಗಳು ಮಾತ್ರ ಒಟ್ಟುಗೂಡುತ್ತವೆ. ಹೀಗೆ ಶಿಲೀಂಧ್ರಗಳಲ್ಲಿ ಹಲವಾರು ವಿಧದ ಸಂಯೋಗವನ್ನು ನೋಡಬಹುದು: 1 ಗ್ಯಾಮೀಟುಗಳ ಸಂಯೋಗ (ಗ್ಯಾಮಿಟಿಕ್ ಕಾಪ್ಯು ಲೇಷನ್), 2 ಗ್ಯಾಮಿಟಾಂಜಿಯಗಳ ಸಂಪರ್ಕ (ಗ್ಯಾಮಿಟಾಂಜಿಯಲ್ ಕಾಂಟ್ಯಾಕ್ಟ್), 3 ಗ್ಯಾಮಿಟಾಂಜಿಯಗಳ ಸಂಯೋಗ (ಗ್ಯಾಮಿಂಟಾಜಿಯಲ್ ಕಾಪ್ಯುಲೇಷನ್), 4 ಸ್ಪರ್ಮಟೈಸೇಷನ್, 5 ಗ್ಯಾಮೀಟುಗಳಿಲ್ಲದ ಸಂಯೋಗ (ಸೊಮ್ಯಾಟೊಗಮಿ).

	ಶಿಲೀಂಧ್ರಗಳು ಹಾನಿಕಾರಕ ಸಸ್ಯಗಳು, ವಿವಿಧ ಬಗೆಯ ಕಾಯಿಲೆಗಳನ್ನು ಉಂಟುಮಾಡುವುದಲ್ಲದೆ, ಇತರ ಸಸ್ಯಗಳ ನಾಶಕ್ಕೆ ಕಾರಣವಾಗುತ್ತವೆ. ಪೈರುಗಳನ್ನು ನಾಶಮಾಡುವುದರಲ್ಲಿ ಇವುಗಳ ಪಾತ್ರ ಹಿರಿದು.

	ಶಿಲೀಂಧ್ರಗಳನ್ನು 4 ವರ್ಗಗಳನ್ನಾಗಿ ವಿಂಗಡಿಸಲಾಗಿದೆ. 

	1 ಫೈಕೋಮೈಸಿಟೀಸ್: ಹೈಫಗಳಿಗೆ ಅಡ್ಡಭಿತ್ತಿಯಿಲ್ಲ. ಅಲೈಂಗಿಕ ಪ್ರಜನನದಲ್ಲಿ ಬೀಜಕಗಳು ಸ್ಪೊರ್ಯಾಂಜಿಯ ಎಂಬ ರಚನೆಗಳಲ್ಲಿ ಉತ್ಪತ್ತಿಯಾಗುತ್ತದೆ. ಗ್ಯಾಮೀಟುಗಳ ಸಂಯೋಗಾನಂತರ ಓವೊಸ್ಪೋರ್ ಅಥವಾ ಜೈóಗೋಸ್ಪೋರ್ ರೂಪುಗೊಳ್ಳುತ್ತದೆ. ಉದಾಹರಣೆಗಳು: ಮ್ಯೂಕರ್, ಅಲ್ಟ್ಯುಗೊ, ಸ್ಯಾಪ್ರೊಲಿಗ್ನಿಯ.

	2 ಆಸ್ಕೊಮೈಸಿಟೀಸ್: ಮೈಸೀಲಿಯಮ್ ಅಡ್ಡಭಿತ್ತಿಯುಳ್ಳದ್ದು. ಲೈಂಗಿಕ ರೀತಿಯ ಪ್ರಜನನ ಕ್ರಿಯೆಯಲ್ಲಿ ರೂಪುಗೊಳ್ಳುವುವು. ಇವು ಆಸ್ಕಸ್ ಎಂಬ ಅಂಗಗಳಲ್ಲಿ ಹುಟ್ಟುತ್ತದೆ. ಯೀಸ್ಟ್, ಪೆನಿಸಿಲಿಯಮ್ ಪೆಜೈಜ ಮೊದಲಾದುವು ಈ ವರ್ಗದ ಉದಾಹರಣೆಗಳು.

	3 ಬೆಸಿಡಿಯೋಮೈಸಿಟೀನ್: ಈ ವರ್ಗದ ಶಿಲೀಂಧ್ರಗಳು ಲೈಂಗಿಕ ಪ್ರಜನನದಲ್ಲಿ ಬೆಸಿಡಿಯೋಸ್ಟೋರುಗಳನ್ನು ಉತ್ಪತ್ತಿಮಾಡುವುವು. ಈ ಬೀಜಕಗಳು ಬೆಸಿಡಿಯ ಎಂಬ ಅಂಗಗಳ ಹೊರಭಾಗದಲ್ಲಿ ಹುಟ್ಟುವುವು. ಅಣಬೆ ಜಾತಿಯ ಶಿಲೀಂಧ್ರಗಳು ಈ ವರ್ಗಕ್ಕೆ ಸೇರಿದೆ.

	4 ಡ್ಯುಟಿರೋಮೈಸಿಟೀಸ್: ಲೈಂಗಿಕ ಪ್ರಜನವನ್ನು ಇವುಗಳಲ್ಲಿ ಗುರುತಿಸಲಾಗಿಲ್ಲ.

	5 ಮಿಕ್ಲೊಮೈಸಿಟೀಸ್: ಇವು ಶಿಲೀಂಧ್ರಗಳಿಂದ ಬೇರೆಯಾದ ಒಂದು ಗುಂಪು. ಈ ಗುಂಪಿನ ಸಸ್ಯಗಳಿಗೆ ಲೋಳೆ ಬೂಷ್ಟು (ಸ್ಲೈಮ್ (ಮೋಲ್ಡ್ಸ್) ಎಂಬ ಹೆಸರಿದೆ. ಸಸ್ಯದೇಹವನ್ನು ಪ್ಲಾಸ್ಮೋಡಿಯಮ್ ಎಂದು ಕರೆಯಲಾಗುತ್ತದೆ. ಜೀವಕೋಶಗಳಿಗೆ ಕೋಶಭಿತ್ತಿ ಇಲ್ಲ. ಇವುಗಳಲ್ಲಿ ಜೀವಕೋಶವೆಂದರೆ ಅನೇಕ ನ್ಯೂಕ್ಲಿಯಸ್‍ಗಳಿಂದ ಕೂಡಿರುವ ಜೀವರಸ ರಾಶಿ. ಇದಕ್ಕೆ ನಿರ್ದಿಷ್ಟ ಆಕಾರವಿಲ್ಲ. ಕೆಲವೊಮ್ಮೆ ಬಲೆಯಾಕಾರದಲ್ಲಿ ಹರಡಿಕೊಂಡಿರುವುದುಂಟು. ಬೆಳಕಿನಿಂದ ಆದಷ್ಟು ದೂರವಾಗಿಯೇ ಜೀವಿಸುತ್ತದೆ. ಇವುಗಳಲ್ಲಿ ಕಂಡುಬರುವ ಅಮೀಬದಂಥ ಚಲನೆ ಮತ್ತು ಆಹಾರ ಪಡೆಯುವ ಕ್ರಮದಿಂದಾಗಿ ಮೊದಲು ಇವನ್ನು ಪ್ರಾಣಿಗಳ ಗುಂಪಿಗೆ ಸೇರಿಸಲಾಗಿತ್ತು. ಜೀವರಸದಲ್ಲಿನ ಕಿಣ್ವಗಳು ಆಹಾರವನ್ನು ಜೀರ್ಣಿಸುತ್ತದೆ. ಪ್ಲಾಸ್ಮೋಡಿಯಮ್ ಮುಂದಕ್ಕೆ ಚಲಿಸಿದಂತೆ ತ್ಯಾಜ್ಯಪದಾರ್ಥಗಳು ವಿಸರ್ಜಿಸಲ್ಪಡುತ್ತವೆ.

	ಮಿಕ್ಸೊಮೈಸಿಟೀಸ್ ಗುಂಪಿನ ಸಸ್ಯಗಳು ತೇವಪೂರಿತ ಹಾಗೂ ಕೊಳೆತ ಎಲೆ, ಮರದ ತೊಗಟೆ, ಮರದ ಹೊಟ್ಟು ಮುಂತಾದ ಸಾವಯವ ಪದಾರ್ಥಗಳಿರುವಲ್ಲಿ ಬೆಳೆಯುವುವು. ಅನನುಕೂಲ ಪರಿಸ್ಥಿತಿಗಳಲ್ಲಿ ಪ್ಲಾಸ್ಮೋಡಿಯಮ್ ಮಂದವಾದ ಹಾಗೂ ಗಟ್ಟಿಯಾದ ಸ್ಕ್ಲೀರೋಷಿಯಮ್ ಎಂಬ ರಚನೆಯನ್ನು ಉತ್ಪಾದಿಸುವುದು. 

	ಆಹಾರ ಪೂರೈಕೆ ಕಡಿಮೆಯಾದಂತೆ ಪ್ಲಾಸ್ಮೋಡಿಯಮ್ ರಾಶಿ ತೇವಪ್ರದೇಶದಿಂದ ಒಣಪ್ರದೇಶಕ್ಕೆ ಚಲಿಸುತ್ತದೆ. ಫ್ಯೂಲಿಗೊ, ಫೈಗೌರಮ್ ಮೊದಲಾದ ಜೀವಿಗಳಲ್ಲಿ ಸ್ಪೊರ್ಯಾಂಜಿಯಗಳು ರೂಪುಗೊಳ್ಳುವುವು. ಇವಕ್ಕೆ ಪ್ರಕ್ಟಿಫಿಕೇಷನ್ ಎಂದು ಹೆಸರು. ಸ್ಪೊರ್ಯಾಂಜಿಯವನ್ನು ಸುತ್ತುವರಿದಿರುವ ಗೋಡೆಯೇ ಪೆರಿಡಿಯಮ್, ಸ್ಪೊರ್ಯಾಂಜಿಯದಲ್ಲಿರುವ ಪ್ಲಾಸ್ಮೋಡಿಯಮ್ ಛಿದ್ರಿಸಲ್ಪಟ್ಟು ಅನೇಕ ಬೀಜಕಗಳು ಉತ್ಪತ್ತಿಯಾಗುತ್ತದೆ. ಸ್ಪೊರ್ಯಾಂಜಿಯಮ್ ಅಲ್ಲದೆ ಏತ್ಯಾಲಿಯಮ್ ಮತ್ತು ಪ್ಲಾಸ್ಮೋಡಿಯೋಕಾರ್ಪ್ ಎಂಬ ಇತರ ಬಗೆಯ ಫ್ರಕ್ಟಿಫಿಕೇಷನ್‍ಗಳೂ ರೂಪುಗೊಳ್ಳುವುದುಂಟು. ಪ್ರತಿಯೊಂದು ಬೀಜಕವೂ ನುಣುಪಾದ ಇಲ್ಲವೆ ಮುಳ್ಳುಗಳಿಂದ ಕೂಡಿದ ಅಥವಾ ಬಲೆಯಾಕಾರದ ಭಿತ್ತಿಯಿಂದ ಆವೃತವಾಗಿದೆ. ಬಣ್ಣವೂ ವಿವಿಧ ರೀತಿಯದು. ಹಳದಿ, ನೇರಳೆ, ಗುಲಾಬಿ ಮತ್ತು ಕಪ್ಪುಬಣ್ಣಗಳು ಸಾಮಾನ್ಯ. ಕ್ಯಾಪಿಲ್ಲೀಶಿಯ ಎಂಬ ಕಡ್ಡಿ ಸದೃಶ ರಚನೆಗಳು ಬೀಜಕಗಳ ಪ್ರಸಾರದಲ್ಲಿ ಸಹಾಯಮಾಡುವುವು.

	ಬೀಜಕಗಳು ಮೊಳೆತು ಮಿಕ್ಸಮೀಬ ಅಥವಾ ಚಲಿಸುವ ಜೀವಕೋಶಗಳನ್ನು ಉತ್ಪತ್ತಿಮಾಡುತ್ತವೆ. ಇವು ಒಂದರೊಡನೊಂದು ಸಂಯೋಗವಾಗಿ ಯುಗ್ಮಜ ರೂಪುಗೊಳ್ಳುತ್ತವೆ. ಇದರ ನ್ಯೂಕ್ಲಿಯಸ್ ಮೈಟೋಸಿಸ್ ರೀತಿಯಲ್ಲಿ ವಿಭಜನೆಗೊಂಡು ಅನೇಕ ನ್ಯೂಕ್ಲಿಯಸ್‍ಗಳನ್ನು ಉಂಟುಮಾಡುತ್ತದೆ. ಹೀಗೆ ಹೊಸ ಪ್ಲಾಸ್ಮೋಡಿಯಮ್ ಉತ್ಪತ್ತಿಯಾಗುತ್ತದೆ.

	III ಕಲ್ಲುಹೂಗಳು: ಭಿನ್ನರೀತಿಯ ಎರಡು ಸಸ್ಯಗಳ ಸಂಘಟನೆಯಿಂದ ರೂಪುಗೊಂಡಿರುವ ವಿಚಿತ್ರ ಸಸ್ಯಗಳೆಂದರೆ ಕಲ್ಲುಹೂಗಳು ಅಥವಾ ಶಿಲಾವಲ್ಕಗಳು. ಇವುಗಳಲ್ಲಿ ಒಂದು ಎಳೆಯ ರೂಪದ ಶಿಲೀಂಧ್ರ, ಇನ್ನೊಂದು ಪಾಚಿ. ಇವೆರಡರ ಸಂಘಟನೆ ಎಷ್ಟು ಅನ್ಯೋನ್ಯವಾಗಿದೆಯೆಂದರೆ ಅವೆರಡೂ ಸೇರಿ ಒಂದೇ ಸಸ್ಯದ ಹಾಗೆ ಕಾಣುತ್ತದೆ. ಅವುಗಳ ಸಂಬಂಧದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಶಿಲೀಂಧ್ರ ಪಾಚಿಯ ಮೇಲೆ ಪರಾವಲಂಬಿಯಾಗಿರುತ್ತದೆ ಎಂಬ ಅಭಿಪ್ರಾಯವುಂಟು. ಆದರೆ ಇವೆರಡು ಘಟಕಗಳೂ ಪರಸ್ಪರಾವಲಂಬ ಜೀವನವನ್ನು ನಡೆಸುತ್ತದೆ. ಶಿಲೀಂಧ್ರ ಇಡೀ ಸಸ್ಯಕ್ಕೆ ಬೇಕಾದ ನೀರನ್ನು ಒದಗಿಸುತ್ತದಾದರೆ ಪಾಚಿ ಈ ನೀರನ್ನು ಉಪಯೋಗಿಸಿಕೊಂಡು ಆಹಾರವನ್ನು ತಯಾರಿಸುತ್ತದೆ. 

	ಕಲ್ಲುಹೂಗಳು ಎಲ್ಲ ಕಡೆಗಳಲ್ಲೂ ಬೆಳೆಯಬಲ್ಲವು. ಬೇರೆ ಸಸ್ಯಗಳು ಬೆಳೆಯಲಾರದಂಥ ಪ್ರದೇಶಗಳ್ಲೂ ಇವು ಕಾಣಸಿಗುತ್ತವೆ. ಬಂಡೆ, ಮರದ ತೊಗಟೆ, ಕೊಳೆಯುತ್ತಿರುವ ಮರ ಅಲ್ಲದೆ ನೆಲದ ಮೇಲೂ ಬೆಳಯುತ್ತದೆ. ಕಲ್ಲುಹೂಗಳ ಬಾಹ್ಯರಚನೆ ಮತ್ತು ಬಣ್ಣಗಳಲ್ಲಿ ವ್ಯತ್ಯಾಸವಿದೆ. ಬಿಳಿ, ಹಳದಿ, ಕಿತ್ತಳೆ, ಹಸಿರು, ಕಪ್ಪು_ಹೀಗೆ ವಿವಿಧ ಬಣ್ಣಗಳ ಕಲ್ಲುಹೂಗಳನ್ನು ಕಾಣಬಹುದು. ಇವುಗಳ ಬಾಹ್ಯರೂಪ ಆಧಾರದ ಮೇಲೆ ಕ್ರಸ್ಟೋಸ್, ಫೋಲಿಯೋಸ್ ಮತ್ತು ಫ್ರೂಟಿಕೋಸ್ ಲೈಕನ್ಸ್ ಎಂಬ ಮೂರು ವಿಧಗಳನ್ನಾಗಿ ವಿಂಗಡಿಸಲಾಗಿದೆ.

	ಕಲ್ಲುಹೂ ಸಸ್ಯದ ಒಳರಚನೆಯನ್ನು ವೀಕ್ಷಿಸಿದರೆ ಕಾರ್ಟೆಕ್ಸ್ ಮತ್ತು ಗೊನಿಡಿಯಲ್ ಪದರಗಳೆಂಬ ಎರಡು ವಲಯಗಳನ್ನು ಗುರುತಿಸಬಹುದು. ಕಾರ್ಟೆಕ್ಸ್ ವಲಯಗಳಲ್ಲಿ ಒತ್ತಾಗಿ ಹಣೆದುಕೊಂಡಿರುವ ಶಿಲೀಂಧ್ರದ ಎಳೆಗಳಿವೆ. ಗೊನಿಡಿಯಲ್ ಪದರದಲ್ಲಿ ಶಿಲೀಂಧ್ರದ ಎಳೆಗಳು ವಿರಳವಾಗಿದ್ದು ಮಧ್ಯೆ ಮಧ್ಯೆ ಪಾಚಿಯ ಜೀವಕೋಶಗಳು ಕಂಡುಬರುತ್ತವೆ : ಸಸ್ಯವು ರೈಜಿನ್ಸ್ ಎಂಬ ಬೇರುಗಳಂಥ ರಚನೆಗಳಿಂದ ತಮ್ಮ ಆಧಾರಗಳಿಗೆ ಅಂಟಿಕೊಂಡಿರುತ್ತದೆ. ಕಲ್ಲುಹೂಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾಚಿಗಳೆಂದರೆ ನಾಸ್ಟಾಕ್. ಗ್ಲಿಯೋಕ್ಯಾಪ್ಸ. ಟ್ರೆಂಟೇಫೋಲಿಯ, ಕ್ಲಾಡಾಪೊರ ಮೊದಲಾದವು. ಅಲ್ಲದೆ ವಾಯುವಿನಿಮಯಕ್ಕೆ ಅನುಕೂಲವಾಗುವಂತೆ ಸಿಫೆಲ್ಲೆ ಮತ್ತು ಉಸಿರಾಟದ ರಂಧ್ರಗಳನ್ನೂ ಇವುಗಳ ಕಾಯದಲ್ಲಿ ಗುರುತಿಸಬಹುದು.

	ಪ್ರಜನನ ಮೂರು ವಿಧಗಳಲ್ಲಿ ನಡೆಯುತ್ತದೆ: 1 ಖಂಡೀಕರಣ: ಸಸ್ಯದ ಯಾವುದೋ ಒಂದು ಭಾಗ ಬೇರ್ಪಟ್ಟು ಹೊಸ ಸಸ್ಯವಾಗಿ ಬೆಳೆಯುತ್ತದೆ. ಅಲ್ಲದೆ ಸೊರಿಡಿಯ, ಇಸಿಡಿಯ ಮೊದಲಾದ ರಚನೆಗಳು ಬೆಳೆದು ವಂಶಾಭಿವೃದ್ಧಿಗೆ ನೆರವಾಗುತ್ತದೆ.

	2 ಅಲೈಂಗಿಕ ಪ್ರಜನನ: ಸಸ್ಯಕಾಯದ ಒಳಭಾಗದಲ್ಲಿ ಶಿಲೀಂಧ್ರವು ಕೊನಿಡಿಯ ಎಂಬ ಬೀಜಕಗಳನ್ನು ಉತ್ಪತ್ತಿಮಾಡುತ್ತದೆ. ಇವು ಬಿಡುಗಡೆಗೊಂಡು ಪ್ರಸಾರವಾಗಿ, ಹೈಫಗಳು ಬೆಳೆದು ಸೂಕ್ತವಾದ ಪಾಚಿಯೊಂದಿಗೆ ಕೂಡಿಕೊಂಡಾಗ ಹೊಸ ಸಸ್ಯ ಉಂಟಾಗುತ್ತದೆ.

	3 ಲೈಂಗಿಕ -ಜನನ: ಕಲ್ಲುಹೂವಿನ ಶಿಲೀಂಧ್ರ ಮಾತ್ರ ಈ ಕ್ರಿಯೆಯಲ್ಲಿ ಭಾಗವಿಸುತ್ತದೆ. ಇದು ಆಸ್ಕೊಮೈಸಿಟೀಸ್ ಅಥವಾ ಬೆಸಿಡಿಯೋಮೈಸಿಟೀಸ್ ಗುಂಪಿಗೆ ಸೇರಿದ ಶಿಲೀಂಧ್ರವಾಗಿರುವುದರಿಂದ ನಿಷೇಚನಕ್ರಿಯೆಯ ತರುವಾಯ ಆಸ್ಕೊಸ್ಪೋರು ಬೆಸಿಡಿಯೋಸ್ಪೋರುಗಳು ಉತ್ಪತ್ತಿಯಾಗುವುವು. ಬೀಜಕಗಳು ಮೊಳೆತು ಮೈಸೀಲಿಯಮ್ ರೂಪುಗೊಳ್ಳುತ್ತದೆ. ಸರಿಯಾದ ಪಾಚಿ ಸಿಕ್ಕಿದರೆ ಹೊಸ ಕಲ್ಲುಹೂ ಉಂಟಾಗುತ್ತದೆ.

	ಕಲ್ಲುಹೂಗಳಲ್ಲಿರುವ ಶಿಲೀಂಧ್ರದ ಆಧಾರದ ಮೇಲೆ ಇವನ್ನು ಆಸ್ಕೊಲೈಕನ್ಸ್ ಮತ್ತು ಬೆಸಿಡಿಯೊಲೈಕನ್ಸ್ ಎಂಬ ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಗ್ರಾಫಿಸ್, ಲ್ಯಾಕನೋರ, ಪಾರ್ಮಿಲಿಯ, ಆಸ್ನಿಯ, ಕ್ಲ್ಯಾಡೋನಿಯ ಮೊದಲಾದುವು ಈ ವರ್ಗದ ಸಸ್ಯಗಳು. 

	ಕಲ್ಲುಹೂಗಳು ಹಲವಾರು ವಿಧಗಳಲ್ಲಿ ಮನುಷ್ಯನಿಗೆ ಪ್ರಯೋಜನಕಾರಿಯಾಗಿವೆ. ತಾವು ಬೆಳೆದ ನೆಲೆಯಲ್ಲಿ ಇತರ ಸಸ್ಯಗಳು ಬೆಳೆಯಲು ಸೂಕ್ತವಾದ ಅವಕಾಶ ಕಲ್ಪಿಸಿಕೊಡುತ್ತವೆ. ರ್ಯಾಮಲೈನ, ಸಿಟ್ರೇರಿಯ, ಕ್ಲ್ಯಾಡೋನಿಯ ಬಗೆಗೆಳು ಕೆಲವು ಪ್ರಾಣಿಗಳಿಗೂ ಮನುಷ್ಯರಿಗೂ ಆಹಾರವಾಗಿ ಉಪಯುಕ್ತವಾಗಿವೆ. ಔಷಧಿಗಳಲ್ಲು ಸುಗಂಧದ್ರವ್ಯಗಳ ತಯಾರಿಕೆಯಲ್ಲಿಯೂ ಬಣ್ಣಕೈಗಾರಿಕೆಗಳಲ್ಲೂ ಇವುಗಳ ಬಳಕೆ ಉಂಟು.

	ಬ್ಯಾಕ್ಟೀರಿಯ ಮತ್ತು ವೈರಸ್‍ಗಳನ್ನು ಬೇರೆಡೆಯಲ್ಲಿ ವಿವರಿಸಲಾಗಿದೆ.
(ಎಸ್.ಡಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ